ಅಡುಗೆ ಮನೆಯಲ್ಲಿ ಅಮ್ಮನಿಗೆ ಇಷ್ಟ ಅಂತ ಅರಿವೆ ಸೊಪ್ಪಿನ ಪಲ್ಯ ಮಾಡಲು ರೆಡಿ ಮಾಡುತಿದ್ದೆ. ಹೊರಗಡೆ ಗೇರುಹಣ್ಣು ಕೀಳುತ್ತಿದ್ದ ಅಮ್ಮ ಮುನ್ನಿ(ಅಮ್ಮ ಪ್ರೀತಿಯಿಂದ ಕರೆಯುವ ಹೆಸರು) ಬಾರೆ ಇಲ್ಲಿ ಎಂದು ಕರೆದರು.
ಸೊಪ್ಪಿಗೆ ಒಗ್ಗರಣೆ ಹಾಕಲು ಎಣ್ಣೆ ಇಟ್ಟ ನಾನು ಗ್ಯಾಸ್ ಸಣ್ಣಕ್ಕೆ ಮಾಡಿ ಹೊರಗಡೆ ಬಂದಾಗ ನಮ್ಮ ಮನೆ ಗೇಟ್ ಮುಂದೆ ಒಂದು ಸೈಕಲ್ ನಿಂತಿತ್ತು. ಅದನ್ನ ನೋಡಿ ಅಮ್ಮ ಆ ಸೈಕಲ್ ನೋಡೆ ಯಾರದು ಅಂತ ಗೋತ್ತಾ? ಅಂತ ಕೇಳಿದರು.
ಗೊತ್ತಿಲ್ಲ ಎಂದು ಒಳ ಹೋಗಬೇಕು ಅನ್ನುವಷ್ಟರಲ್ಲಿ ಅಂಜು ಅಕ್ಕ ನನಗೆ ವಿಸಿಡಿ ಇದ್ದರೆ ಕೊಡಿ ಎಂದು ಕೇಳುತ್ತಿದ್ದ ನನ್ನ ಪುಟ್ಟ ಚಿಕ್ಕಮ್ಮನ ಪುಟ್ಟ ಮಗ.
ಈಗ ಆರನೇ ತರಗತಿ ಓದುತ್ತಿದ್ದಾನೆ. ಈತನ ಹೆಸರು ಪ್ರಶಾಂತ್. ಅವನ ತಾಯಿ ತಂದೆ ಉಳಿದ ದೋಡ್ಡೋರೆಲ್ಲಾ ಈತನನ್ನು ಪಚ್ಚು ಅಂತ ಕರೆದರೆ. ನಾವೆಲ್ಲ ಹಾಗಲ್ಲ ಒಬ್ಬೊಬ್ಬರು ಒಂದೋದು ಹೆಸರಲ್ಲಿ ಕರಿತೀವಿ. ನಾನು ಪಚ್ಚು ಕುಟ್ಟ ಅಂತ ಕರೆದರೆ ಇನ್ನು ಕೆಲವರು ಕುಟ್ಟ ಅಂತ ಕರೆದರೆ ಇನ್ನೂಕೆಲವರು ಬಬ್ಲಿ ಅಂತೆಲ್ಲಾ ಕರಿಯೋದು.
ಈಗ ಆರನೇ ತರಗತಿಯಲ್ಲಿದ್ದರೂ ಈತ ನೋಡೋಕೆ ಮುರನೇ ಕ್ಲಾಸಿನ ಹುಡುಗನಂತಿದ್ದಾನೆ. ಆದರೆ ಆತ ಮಾಡೋ ಕೆಲಸ ಬರೀ ರೀಪೆರೀ ಕೆಲಸನೇ ನಮ್ಮ ಊರಿನ ಏಲ್ಲಾ ಮಕ್ಕಳ ರೇಡಿಯೋ, ಟಾರ್ಚ್ ಹಾಗು ಏಲ್ಲಾ ವಿದ್ಯುತ್ ಉಪಕರಣಗಳು ಎಲ್ಲವನ್ನೂ ಇವನೆ ಸರಿ ಮಾಡಿ ಕೊಡುವವನು.
ಸಣ್ಣವನಿರುವಾಗ ದೊಡ್ಡವನಾದ ಮೇಲೆ ಎನಾಗುತ್ತೀಯಾ ಅಂತ ಕೇಳಿದರೆ ಚೆನ್ನಾಗಿ ಕಲಿತು ಫಾರಿನ್ ಹೋಗುತ್ತೀನಿ ಅಂತಾನೆ. ಅಲ್ಲಿ ಹೋಗಿ ಎನ್ ಮಾಡುತ್ತೀಯ ಅಂತ ಕೇಳಿದರೆ ಅಲ್ಲಿ ಹೋಗಿ ಮೀನು ಹಿಡಿಯುತ್ತೇನೆ ಅಂತ ಹೇಳುತ್ತಿದ್ದ.
ಎಲ್ಲರೂ ಜೊತೆಗೆ ಊಟಕ್ಕೆ ಕೂತರೆ ಹತ್ತಿರ ಕೂತವನ ತಟ್ಟೆಯಿಂದ ಮೀನು ತೆಗೆದು ತಿನ್ನುತ್ತಿದ್ದ ಅವರು ಕೇಳಿದಾಗ ಅದಾ ಕಂಡು ಪುಚ್ಚೆ ಕೋನೋಂಡು (ಕಳ್ಳ ಬೆಕ್ಕು ತೆಗೆದು ಕೊಂಡು ಹೋಯಿತು) ಅನ್ನೋನು ಆಗ ಎಲ್ಲರೂ ನಕ್ಕು ತಮ್ಮ ಊಟ ಮುಗಿಸುತ್ತಿದ್ದರು.
ಅಯ್ಯೋ ಅವನ ಸೈಕಲ್ ವಿಷಯ ಹೇಳೋದು ಬಿಟ್ಟು ಇದನ್ನೆಲ್ಲಾ ಹೇಳ್ತಾ ಇದ್ದಿನಲ್ಲ ಅಂತ ಬೈಕೊಬೇಡಿ. ವಿಸಿಡಿ ಕೇಳಿದ ಆತನನ್ನು ಪರಿಕ್ಷೇ ಬಂತು ಕಲಿಯಬೇಕು ಆಮೇಲೆ ವಿಸಿಡಿ ನೋಡೋದೆಲ್ಲಾ ಎಂದು ಗದರಿಸಿದೆ.
ಆದರೆ ಆತ ಅಯ್ಯೋ ನೋಡೋದಿಕ್ಕಲ್ಲ ನನ್ನ ಸೈಕಲ್ ಗೆ ಬೇಕು ಅಂತ ಹೇಳಿ ನನ್ನನ್ನು ಅದರ ಪಕ್ಕ ಕರೆದು ಕೋಡು ಹೋದ. ಆ ಸೈಕಲ್ ನೋಡಿ ನನಗೆ ಆಶ್ಚರ್ಯವಾಯಿತು. ಇದು ನಿನ್ನ ಸೈಕಲ ಅಂತ ಕೇಳಿದೆ ಅದಕ್ಕವನು ಹ ನೀನೆ ಕೊಡಿಸಿದ ಸೈಕಲ್ ಅಂತ ಹೇಳಿದರು ನಾನು ನಂಬಲು ಸಾದ್ಯವಿಲ್ಲ ಅನ್ನುವಂತಿತ್ತು ಆ ಸೈಕಲ್.
ನಾನು ಆ ಸೈಕಲನ್ನು ನನ್ನ ತಮ್ಮನ ಒತ್ತಾಯಕ್ಕೆ ಐವತ್ತು ರೂಪಾಯಿ ಕೊಟ್ಟು ತೆಗೆದು ಕೊಂಡಿದ್ದೆ. ನಂತರ ಅದಿಕ್ಕೆ ನೂರರಿಂದ ಐನೂರರ ವರೆಗೆ ಖರ್ಚು ಮಾಡಿ ಓಡಿಸುತ್ತಿದ್ದ. ನಂತರ ಆತನ ಕಾಲಿಗೆ ಏಟಾದ ಮೇಲೆ ಆತನಿಗೆ ಸೈಕಲ್ ಓಡಿಸಲು ಆಗುತ್ತಿರಲಿಲ್ಲ. ಮತ್ತದು ಮೂಲೆ ಸೇರಿತು.
ಎರಡು ವರುಷದ ಬಳಿಕ ಪಚ್ಚುನ ಅಣ್ಣ ಅಣ್ಣು ಆ ಸೈಕಲನ್ನು ತೆಗೆದು ಕೊಡು ಹೋಗಿ ಅದಿಕ್ಕೆ ಪೈಂಟಿಗ್ ಮಾಡಿಸಿ ಓಡಿಸುತ್ತಿದ್ದ ನಂತರ ಓದಿನ ಒತ್ತಡ ಜಾಸ್ತಿ ಆದ ಹಾಗೆ ಸೈಕಲ್ ಕಡೆಗಿನ ಒಲವು ಕಡಿಮೆಯಾಯಿತು.
ಈಗ ಸೈಕಲ್ ಪಚ್ಚುವಿನ ಕೈಯಲ್ಲಿ ಇದೆ. ಈ ಸೈಕಲ್ ಅವನಿಗೆ ಖುಷಿಯಾಗಿರುವುದಕ್ಕಿಂತ ಆ ಸೈಕಲ್ ತುಂಬಾ ಖುಷಿಪಟ್ತಿರುತ್ತೆ. ಯಾಕೆಂದರೆ ಆತ ಸೈಕಲನ್ನು ಹಾಗಿಟ್ಟು ಕೊಂಡಿದ್ದಾನೆ. ಒಳ್ಳೆ ಎ.ಸಿ ಕಾರಿನಲ್ಲಿರುವಂತೆ ಎಫ್.ಯಮ್ ರೇಡಿಯೋ ಅದೂ ಒಂದಲ್ಲ ಎರಡು, ನಮ್ಮೂರಲ್ಲಿ ಹತ್ತು ರೂಪಾಯಿಗೆ ಸಿಗುವ ಮೂರು ಕಲ್ಲರಿನ ಟಾರ್ಚು ಅದು ಒಂದಲ್ಲ ಐದರ ತನಕ ಇರಬಹುದು. ಇದಕ್ಕೆಲ್ಲ ಒಂದೇ ಸ್ವಿಚ್ಚು, ಹಾಗೆ ಕರೆಂಟು ಚಾರ್ಜ್ ಮಾಡುವಂತಹ ಎರಡು ಬ್ಯಾಟರಿಗಳು,ಆಮೇಲೆ ವಿಸಿಡಿಗಳಿಗೆಲ್ಲಾ ದೇವರ ಫೋಟೋ ಅಥವಾ ಶರ್ಟ್ ಗಳಿಗೆ ಹಾಕುವಂತ ಗುಂಡಿಗಳನೆಲ್ಲಾ ಜೋಡಿಸಿ ಅಲಂಕಾರ ಮಾಡಿದ್ದಾನೆ.ಸೈಕಲಿನ ಚಕ್ರದ ಕಡ್ಡಿಗಳಿಗೆ ಮೀನು ಹಾಗು ತಾವರೆಯಂತ ಏನೋ ವಸ್ತುಗಳನೆಲ್ಲಾ ಜೋಡಿಸಿ ಅಲಂಕರಿಸಿದ್ದಾನೆ.
ಎಲ್ಲಾ ಮಕ್ಕಳು ಇವನ ಸೈಕಲ್ ನೋಡಿ ಹೊಟ್ಟೆ ಉರಿಪಟ್ಟುಕೊಳ್ಳಬೇಕು ಹಾಗಿದೆ ಈ ಸೈಕಲ್ ಈತನ ಕೈಗೆ ಬಂದಾಗಿನಿಂದ ಒಂದು ದಿನನೂ ರೀಪೇರಿಗೆ ಹೋಗಿಲ್ಲ. ಈ ಸೈಕಲನ್ನು ಯಾರೊಬ್ಬರು ಮುಟ್ಟುವಂತಿಲ್ಲ. ಹೀಗಿದೆ ಈತನ ಸೈಕಲ್ ಪುರಾಣ.
ಇದನ್ನೆಲ್ಲ ನೋಡಿ ಸರಿ ಈಗ ಹೋಗು ಮತ್ತೆ ಕೊಡುತ್ತೇನೆ ಎಂದು ಕಳುಹಿಸಿಕೊಟ್ಟಾಯಿತು. ಆತನನ್ನು ಕಳುಹಿಸಿ ಒಳಗೆ ಬರುವವರೆಗೂ ಒಲೆ ಮೇಲೆ ಇಟ್ಟ ಒಗ್ಗರಣೆ ನೆನಪಿಗೆ ಬರಲೇ ಇಲ್ಲ. ಮೆಲ್ಲ ಅಡುಗೆ ಮನೆಗೆ ಬಂದರೆ ಸೊಪ್ಪು ಆಗಲೇ ರೆಡಿಯಾಗಿತ್ತು. ನಾನು ಮಾಡಬೇಕಿದ್ದ ಕೆಲಸವನ್ನು ಅಮ್ಮ ಮಾಡಿ ಮುಗಿಸಿದ್ದರು.
ನನ್ನ ಪಚ್ಚು ಕುಟ್ಟನ ಸೈಕಲ್ ನೋಡುತ್ತಾ ನಿಂತು ಒಗ್ಗರಣೆ ಇಟ್ಟಿದ್ದನ್ನೇ ಮರೆತು ಅಮ್ಮನ ಕೈಯಿಂದ ಬೈಸಿಕೊಂಡಂತೆ. ಈತನ ಸೈಕಲ್ ಪುರಾಣ ಓದುತ್ತಾ ಕೂತು ಯಾರ ಕೈಯಿಂದನೂ ಬೈಸ್ಕೋಬೇಡಿ. ಒಂದು ವೇಳೆ ಬೈಸ್ಕೋಂಡರೆ ನಾನಂತೂ ಜವಬ್ದಾರಳಲ್ಲ.